Monday, 3 October 2016

ಗುಪ್ತಗಾಮಿನಿ

'ನಿನ್ನೆಡೆಗೆ ಬರುವಾಗ ಸಿಂಗರದ ಹೊರೆಯೇಕೆ? ಸಡಗರದ ಮಾತುಗಳ ಬಿಂಕವೇಕೆ?!'
ಮೊದಲ ಬಾರಿ ಅವನನ್ನು ನೋಡಹೊರಟಿದ್ದೆ. ಒಂಚೂರು ಭಯ; ಒಂಚೂರು ನಾಚಿಕೆ.
ಕೃಷ್ಣನಿಗೆ ಇಷ್ಟವಾಗುವುದು ರಾಧೆಯ ಬಾಹ್ಯಸೌಂದರ್ಯವಲ್ಲ ಎನಿಸಿತು. ಅವ ಸಿಕ್ಕಾಗ ಹಾಕಿಕೊಳ್ಳಲೆಂದೇ ತೆಗೆದಿರಿಸಿದ್ದ ಹೊಸಾ ಕಿವಿಯೋಲೆಯನ್ನು ಹಾಗೇ ಜೋಪಾನವಾಗಿ ಎತ್ತಿಟ್ಟೆ. ಕಾಡಿಗೆ ಇಲ್ಲದ ಕಣ್ಣುಗಳೊಂದಿಗೆ ಸಿಂಗರದ ಹೊರೆಯಿಲ್ಲದೆ ಕೇವಲ ರಾಧೆಯಾಗಿ ಅವನೆದುರು ನಿಂತಿದ್ದೆ.
ಹೊರಡುವಾಗ ಅದೆಷ್ಟು ಬಾರಿ ಕನ್ನಡಿಯೆದುರು ನಿಂತಿದ್ದೆ?!- ಎಣಿಕೆಯಿಲ್ಲ!

            ಅವನೊಡನೆಯ ಸ್ನೇಹವೇ ಒಂದು ವಿಚಿತ್ರ ಅನುಭೂತಿ. 'To be weird and crazy ' ಎಷ್ಟು ಅದ್ಭುತವಾಗಿರುತ್ತದೆ ಎನ್ನುವುದು ನಮಗೆ ಗೊತ್ತಾಗುವುದು ಅಂತಹದೇ ವ್ಯಕ್ತಿತ್ವದವರೊಡನೆ ಬೆರೆತಾಗ ಮಾತ್ರ! ನನ್ನ-ಅವನ ಬದುಕಿನ ಪಯಣದ ಗಮ್ಯ ಏಇಬಿಂದುವಿನಲ್ಲಿ ಸಂಧಿಸಿತ್ತು; ಹಾಗೇ ನಮ್ಮ ಮನಸ್ಸುಗಳೂ ಕೂಡ!
         ಪ್ರೀತಿ, ಪ್ರತಿಯೊಬ್ಬರ ಹೃದಯದಲ್ಲಿಯೂ ನಿರಂತರವಾಗಿ ಪ್ರವಹಿಸುವ ಗುಪ್ತಗಾಮಿನಿ. ನಿರ್ಜೀವ ಬಂಡೆಯೊಂದರಿಂದ ನುಣುಪು-ನಾಜೂಕಿನ, ಹೊಳಪಿನ ಕಂಗಳ, ಒನಪು-ವಯ್ಯಾರದ ಅಪ್ಸರೆಯೊಬ್ಬಳು ರೂಪುಗೊಳ್ಳುವಂತೆ, ಹೃದಯದ ಪ್ರೀತಿಗೊಂದು ಅಭಿವ್ಯಕ್ತ ರೂಪ ಕೊಟ್ಟಾಗ ಮಾತ್ರ ಅದು ಸುಪ್ತತೆಯನ್ನು ಕಳೆದು ಆಪ್ತವಾಗುತ್ತಾ ಹೋಗುತ್ತದೆ. ನನ್ನೊಳಗಿನ ಪ್ರೀತಿಗೆ ಅಂತಹದ್ದೊಂದು ಸುಂದರತೆಯನ್ನು ತಂದವ ನನ್ನ ಹುಡುಗ. ಮರ ಸುತ್ತಿ, ಡ್ಯುಯೆಟ್ ಹಾಡಿ, ಅಧಿಕಾರಯುತವಾಗಿ ಒಬ್ಬರ ಮೇಲೊಬ್ಬರು ತಮ್ಮ ಅಭಿಪ್ರಾಯಗಳನ್ನು ಹೇರುತ್ತಾ ಬದುಕುವುದಕ್ಕಿಂತಲೂ 'ನಿಜದ ಪ್ರೀತಿ' ಬೇರೊಂದಿದೆ ಎಂದು ಅರ್ಥಮಾಡಿಸಿದ. ಪ್ರೀತಿಯನ್ನು ಅರಸುತ್ತಾ ಮುಗ್ಗರಿಸಿದಾಗ ಕೈಹಿಡಿದೆತ್ತಿ ಮುಂದಿನದಾರಿಗಳಲ್ಲಿ ಜೊತೆಗಾರನಾಗಿ ಬಂದ!

        ಆವತ್ತು ಸಿಕ್ಕಾಗ  ಒಂದಿಷ್ಟು ದೂರ ಜೊತೆಯಲ್ಲಿ ನಡೆಯುವ ಎಂದಾಗ ಅದ್ಯಾವ ನಂಬಿಕೆಯೊಡನೆ ಅವನ ಜೊತೆಗೆ ಹೆಜ್ಜೆ ಬೆಸೆದೆ?! ದಾರಿಯುದ್ದಕ್ಕೂ  'ಬಲ'ಕ್ಕಿದ್ದು ಕಿರುಗಣ್ಣಲ್ಲಿ ನೋಡುತ್ತಿದ್ದವನ್ನು ತಲೆಯೆತ್ತಿ ಕಣ್ತುಂಬಿಕೊಳ್ಳೋಣ ಎನಿಸಿತು. ಆದರೆ ನನಗೆ ಪ್ರೀತಿಗೂ ಮಿಗಿಲಾದ ಜವಾಬ್ದಾರಿಗಳೊಂದಿಷ್ಟಿತ್ತು; ಕಣ್ಣುಗಳು ನೆಲ ನೋಡಿದ್ದವು!
ಜೊತೆಯಲ್ಲಿ ಕುಳಿತಷ್ಟು ಹೊತ್ತು ಅವನ ಕಣ್ಣಂಚಲ್ಲಿ ನಗುವಿತ್ತು, ನನ್ನೊಳಗೆ ಹೇಳಲಾರದೊಂದು ಪುಳಕವಿತ್ತು.

          ಪ್ರೀತಿಸಹೊರಟವನಿಗೆ ಅವಸರಕ್ಕೆ ಪ್ರೀತಿಗೆ ಬೀಳುವ ಯೋಚನೆಯಿಲ್ಲ. ಪ್ರೀತಿಸಿದವಳ ಮೇಲೆ ಅಧಿಕಾರಯುತ ಭಾವವಿಲ್ಲ. ನಮ್ಮ ನಡುವೆ ದೈಹಿಕ ವಾಂಛೆಗಳಿಲ್ಲ; ದೈವಿಕ ಬಂಧವೊಂದು ಜೊತೆಗಿದೆ. ಅವನ ಹುಲಿಮುದ್ದಾಟಕ್ಕೆ ಪ್ರತೀ ಸಾರಿ ಮನಸೋಲುತ್ತೇನೆ. ಅಪ್ಪನ ಪ್ರತಿರೂಪದ ನನ್ನವನಿಗೆ ಈಗ ಇಬ್ಬರು ಹೆಂಗೂಸುಗಳು- ನಾನು ಮತ್ತು ಅವನಮ್ಮ!

No comments:

Post a Comment