Sunday, 19 March 2017

ಉರ್ವಿ; ಕತ್ತಲೆಯ ಜಗತ್ತಿಗೆ ಬೆಳಕಿನ ಲೇಪನ

               ಈಗಿನ ಹೀರೋ oriented ಸಿನಿಮಾಗಳನ್ನು ಹೊರತುಪಡಿಸಿ ನೀವೇನಾದರೂ ಹೊಸತನ್ನು ಬಯಸುವವರಾದರೆ ಜನರಿಗೆ ತಿಳಿದೇ ಇಲ್ಲದ ಸಿನಿಮಾವೊಂದಕ್ಕೆ ಹೋಗಿಬನ್ನಿ. ಖಂಡಿತ ಒಂದು ಒಳ್ಳೆಯ ಅನುಭವ ನಿಮಗಾಗುತ್ತದೆ. ಅದೇ ಫೈಟು, ಅದೇ ಹೀರೋ ಸ್ಟಂಟ್ಸ್, ವಿಲನ್ ಅಬ್ಬರ, ಮಧ್ಯದಲ್ಲೊಂದು ಲವ್ವು, ಇವನ್ನೆಲ್ಲಾ ನೋಡಿ ತಾತ್ಕಾಲಿಕ ಕುರುಡಾದ ಕಣ್ಣೆದುರಿಗೆ ಅದ್ಭುತವಾದ ಪ್ರಪಂಚವೊಂದು ಸೃಷ್ಟಿಯಾಗಿರುತ್ತದೆ. ನೋಡುವ ಮನಸ್ಸು, 'ವಂಡರ್ ಕಣ್ಣು' ನಿಮಗಿರಬೇಕಷ್ಟೇ. ನನಗಾದ ಅನುಭವವೇ ಹೇಳಬೇಕೆಂದರೆ, ಟ್ರೈಲರಿನಲ್ಲಿಯೇ ಏನೋ ಕುತೂಹಲ ಮೂಡಿಸಿದ್ದ ಸಿನಿಮಾವೊಂದು ಬಹಳಷ್ಟು ಜನರಿಗೆ ಗೊತ್ತೇ ಇಲ್ಲ! ತಿಂಗಳ ಹಿಂದೆ ಸಿನಿಮಾಗೆಂದು ಹೋದಾಗ ಟಿಕೆಟ್ ಸಿಗದೆ ಬ್ಲ್ಯಾಕ್ ನಲ್ಲಿ ಕೊಂಡು ನೋಡಿಬಂದ ಅನುಭವವಿದ್ದಿದ್ದರಿಂದ ಒಂದು ಗಂಟೆ ಮುಂಚೆಯೇ ಓಡಿದರೆ ನಮ್ಮನ್ನು ಬಿಟ್ಟು ಬೇರೆ ಜನರೇ ಕಾಣಲಿಲ್ಲ! ಹೊರಡುವಾಗ, ಹೋಗಿ ಬಂದ ಮೇಲೂ 'ಉರ್ವಿ' ನೋಡಿ ಬಂದೆ ಎಂದರೆ ಯಾವ ಭಾಷೆಯ ಚಿತ್ರ ಎಂದು ಕೇಳಿದವರೇ ಜಾಸ್ತಿ!


            ಉರ್ವಿ ಎಂದರೆ ಸಂಸ್ಕೃತದಲ್ಲಿ ಕಾಳಿ ಎನ್ನುವ ಅರ್ಥವಂತೆ. "ಕತ್ತಲು ಸರ್ವಾಂತರ್ಯಾಮಿ. ಇಡೀ ವಿಶ್ವವನ್ನು ಆವರಿಸಿಕೊಂಡಿರುವುದು ಕತ್ತಲೆ. ಕತ್ತಲಿರುವಲ್ಲಿಯೇ ಬೆಳಕಿಗೆ ಬೆಲೆ. ಕತ್ತಲೆಯಿಂದಲೇ ಬೆಳಕಿಗೆ ಜೀವ. ಬೆಳಕು ಹುಟ್ಟುವುದು ಕತ್ತಲೆಯ ಗರ್ಭದಿಂದಲೇ. ಕತ್ತಲೆಯ ಜಗತ್ತಿಗೆ ಬೆಳಕಿನ ಲೇಪನ ಉರ್ವಿ", ಎಂದು ಶುರುವಾಗುವ ಸಿನಿಮಾ, "ಸಂಸಾರವೆಂಬ ಸಾಗರದಲ್ಲಿ ಮುಳುಗಿಹೋದ ಅಲೆಗಳೆಷ್ಟೋ, ಪ್ರೀತಿಯೆಂಬ ದಡ ಸೇರಿಸುವ ನಾವಿಕ ನಾನು, ನನ್ನೊಡತಿ ನೀನು"ಎನ್ನುವ ಇಂತಹ ಮಾರ್ಮಿಕವಾದ ಮಾತುಗಳಿಂದಲೇ ಗಮನ ಸೆಳೆಯುತ್ತದೆ. ಕಡಲತೀರ, ಬಣ್ಣಗಳ ಲೋಕ, ಕೆಂಪು ಲೈಟಿನಲ್ಲಿ ಮುದುಡಿದ ಬೆಡಗಿಯರು ಇವೆಲ್ಲವೂ ಮನಸ್ಸನ್ನು ಆವರಿಸಿಕೊಂಡುಬಿಡುತ್ತವೆ. ಹೆಣ್ಣನ್ನು ಆದಿಶಕ್ತಿಯೆಂದು ಕರೆದು ಹೊಗಳಿ ಅಟ್ಟಕ್ಕೇರಿಸುವ ಜನರು ಸಮಾಜದಲ್ಲಿ ಅದೇ ಹೆಣ್ಣಿನ ಧ್ವನಿಯನ್ನು  ಅಡಗಿಸಲು ಕಾಯುತ್ತಿರುತ್ತಾರೆ. ಯಾವಾಗ 'ಸ್ತ್ರೀ ಶೋಷಣೆ'ಯ ಕುರಿತು ಚರ್ಚೆಗಳು ನಡೆದರೂ, ಹೆಣ್ಣಿನ ವಸ್ತ್ರ, ಆಕೆಯ ನಡವಳಿಕೆಯ ಮೇಲೆ ಜನರ ಎಲುಬಿಲ್ಲದ ನಾಲಿಗೆ ಹರಿದಾಡುತ್ತದೆ. ಇವೇನೂ ಇಲ್ಲದ ಒಬ್ಬ ಅಮಾಯಕಳ ಸುತ್ತ ಅಪಾಯಗಳು ಹೇಗೆ ರಣಹದ್ದುಗಳಂತೆ ಹೊಂಚುಹಾಕಿ ಕಾದುಕುಳಿತಿರುತ್ತವೆ ಎನ್ನುವುದನ್ನು ಉರ್ವಿ ತೋರಿಸುತ್ತದೆ.
            ಅನಾಥೆಯಾದರೂ ದಿಟ್ಟೆ ಆಶಾ, ಕೋಮಲೆ ಸುಜೀ, ಛಲಗಾತಿ ಡೈಸಿಯರದು ಉತ್ತಮ ನಟನೆ.ಶ್ವೇತಾ ಪಂಡಿತ್ ಗೆ  ಉಜ್ವಲ ಭವಿಷ್ಯವಿದೆ ಎನಿಸಿತು. ಶೃತಿ ಹರಿಹರನ್ ಮತ್ತು ಶ್ರದ್ಧಾ ಕೂಡ ಇಷ್ಟವಾಗುತ್ತಾರೆ. ಅಚ್ಯುತ್ ಕುಮಾರ್ ಖಳನಟನಾಗಿ ಪಾತ್ರಕ್ಕೆ ಜೀವ ತುಂಬಿದ್ದಾರೆ. ಸಮುದ್ರತೀರ, ನವಿರು ಪ್ರೀತಿ, ಕರಾಳ ಜಗತ್ತಿನ ಇನ್ನೊಂದು ಮುಖ, ವೇಶ್ಯಾವಾಟಿಕೆಯ ರಂಗಿನ ಬದುಕಿನೊಳಗಿನ ಹುಳುಕುಗಳು ಎಲ್ಲವೂ ಸಿನಿಮಾವನ್ನು ಕೊನೆಯವರೆಗೂ ನೋಡಿಸಿಕೊಂಡು ಹೋಗುತ್ತವೆ.
ದ್ವಿತೀಯಾರ್ಧದಲ್ಲಿ ಸ್ವಲ್ಪ ಕತೆ ಎಳೆದಂತೆ ಭಾಸವಾದರೂ, ಇನ್ನೂ ತಿರುವುಗಳನ್ನು ಪಡೆದುಕೊಂಡು ಕುತೂಹಲ ಕಾಯ್ದಿರಿಸುವಲ್ಲಿ ಸಿನಿಮಾ ಯಶಸ್ವಿಯಾಗಿದೆ. ಸಿನಿಮಾಟೋಗ್ರಫಿ, ಹಾಡುಗಳು ಮತ್ತು ಸಂಭಾಷಣೆಗೆ ಫುಲ್ ಮಾರ್ಕ್ಸ್."ಕಣ್ಣಹನಿ ಜಾರುವಾಗ ಮಾತೆಲ್ಲ ಮೌನವು" ಹಾಡು ಕೇಳುವಾಗ ನನ್ನ ಕಣ್ಣಿಂದಲೂ ನೀರು ಜಿನುಗಿತು. ಇಡೀ ಕತೆ ವೇಶ್ಯಾವಾಟಿಕೆಯ ಸುತ್ತ ನಡೆಯುವುದಾದರೂ ಎಲ್ಲಿಯೂ ಅಶ್ಲೀಲತೆಯ ಸೋಂಕಿಲ್ಲ. ಯಾವುದೂ ಕತೆಗೆ ಅನಗತ್ಯವಾದ ದೃಶ್ಯ ಎನಿಸುವುದಿಲ್ಲ.
         ಉರ್ವಿಯಲ್ಲಿ ಪ್ರೀತಿಯ ಮಧುರ ಅನುಭೂತಿಯಿದೆ. ಮನುಷ್ಯನ ಮುಖವಾಡಗಳ ಚಿತ್ರಣವಿದೆ. ಹೋರಾಟದ ಕಿಚ್ಚಿದೆ. ಭೂಮಿಗೆ ಪರ್ಯಾಯಪದವೂ ಆಗಿರುವ 'ಉರ್ವಿ' ಪುರುಷನ ದೌರ್ಜನ್ಯವನ್ನು ಸಹಿಸಿಕೊಂಡು ಕೊನೆಗೊಮ್ಮೆ ತಾಳ್ಮೆ ಮೀರಿದಾಗ ಸಿಡಿದೇಳುವ ಪ್ರಕೃತಿಯಾಗುತ್ತಾಳೆ.  ಹತ್ತಿಪ್ಪತ್ತು ಅಡಿ ಮೇಲಕ್ಕೆ ಹಾರಿ ಬೀಳುವ ಜೀಪಿನ ದೃಶ್ಯಗಳಂತಹ ಮಸಾಲೆಗಳನ್ನು ಬಯಸುವವರಿಗೆ ಉರ್ವಿ ಇಷ್ಟವಾಗದಿರಬಹುದು. ಆದರೆ ಹೊಸತನ್ನು ಹುಡುಕುವವರಿಗೆ ಕೊಟ್ಟ ದುಡ್ಡಿಗೆ ಮೋಸವಿಲ್ಲ. ಥಿಯೇಟರಿನಿಂದ ಬಂದ ಮೇಲೂ ಉರ್ವಿ ನಿಮ್ಮನ್ನು ತನ್ನ ಗುಂಗಿನಲ್ಲಿ ಮುಳುಗಿಸಿಕೊಳ್ಳದಿದ್ದರೆ ಕೇಳಿ!  ಸಾಧ್ಯವಾದರೆ ಒಮ್ಮೆ ನೋಡಿಬನ್ನಿ. ಮನೆಮಂದಿಯ ಜೊತೆ ಕುಳಿತು ನೋಡುವಂಥ, ನಿಮ್ಮ ಗರ್ಲ್ ಫ್ರೆಂಡ್-ಬಾಯ್ ಫ್ರೆಂಡ್ಸ್ ಗಳು ನೋಡಲೇಬೇಕಾದ, ಸ್ನೇಹಿತರೊಡನೆ ನೋಡಬಹುದಾದ ಉತ್ತಮ ಸಿನಿಮಾ 'ಉರ್ವಿ'. ನಿರ್ದೇಶಕರ ಈ ವಿಶೇಷ ಪ್ರಯತ್ನ ಜನರ ಮನ್ನಣೆ ಗಳಿಸಲಿ. ಎಲ್ಲಕ್ಕಿಂತ ಹೆಚ್ಚಾಗಿ ಒಂದಿಷ್ಟು ಮನಸ್ಸುಗಳಿಗೆ ಇದರ ಆಶಯ ತಲುಪಲಿ.