Wednesday, 3 February 2016

ಜಸ್ಟ್್ ಫ್ರೆಂಡ್ಶಿಪ್- 'ಹನಿ ಹನಿ' ಕಹಾನಿ!

             ಮಳೆಗಾಲದ ಇಳಿಸಂಜೆಯಲ್ಲಿ ಮೈ ಒದ್ದೆಯಾಗಿಸಿಕೊಂಡ ರಸ್ತೆಯನ್ನು ನೋಡುತ್ತಾ ಕಾಫಿ ಹೀರುತ್ತಾ ಕುಳಿತಿದ್ದೆ. ಪಟಪಟನೆ ಮಾತಿನ ಮಳೆಯುದುರಿಸುತ್ತಿದ್ದ ಗೆಳತಿಯರ ಹರಟೆಗಿಂತ ಮಳೆಯೊಡಗಿನ ಮೌನ ಸಂಭಾಷಣೆ ಹಿತವೆನಿಸಿ ಸೀದಾ ರೂಮಿನ ಕಿಟಕಿಯತ್ತ ಎದ್ದು ಬಂದಿದ್ದೆ. ನಿಮಿಷಕ್ಕೊಬ್ಬ ಹುಡುಗನ ಜೊತೆಗೆ ಚಾಟಿಂಗ್, ದಿನಕ್ಕೊಬ್ಬನೊಂದಿಗೆ ಡೇಟಿಂಗ್ ಕಹಾನಿಗಳು ನೀರಸವೆನಿಸಿ ಏಕಾಂತದಲ್ಲಿನ ಅವನೊಂದಿಗಿನ ನೆನಪುಗಳು ಖುಷಿ ಕೊಡುತ್ತಿತ್ತು. ಆದರೆ ಏಕಾಂತವೂ ಅಧೀರತೆಯನ್ನುಂಟು ಮಾಡುತ್ತಿರುವುದು ಇವತ್ತೇ ಎನಿಸುತ್ತದೆ. ವರ್ಷದ ಹಿಂದೆ ಇಂಥದೇ ಮಳೆಗಾಲದ ಒಂದು ದಿನ ನನ್ನೊಂದಿಗಿನ ಸಂಪರ್ಕ ಕಡಿದುಕೊಂಡು ಹೋಗಿದ್ದ ಹುಡುಗ ಮತ್ತೆ ಇವತ್ತು ನೆನಪಾಗಿದ್ದಾನೆ!

           "ಹಾಯ್ ಚಿನ್ನೀ, ಇವತ್ತಿಂದ ನಾವಿಬ್ರೂ ಜಸ್ಟ್ ಫ್ರೆಂಡ್ಸ್ ಆಗಿರೋಣ್ವಾ?! ಯಾಕೋ ನಾವು ಪ್ರೀತಿ ಮಾಡಿ ತಪ್ಪು ಮಾಡಿದ್ವೇನೋ ಅನ್ನಿಸ್ತಿದೆ ನಂಗೆ!"
          ಪ್ರೇಮಿಗಳ ದಿನದಂದು ಅವ ನನಗಿತ್ತ ಗುಲಾಬಿ ಬಾಡದಿರುವಾಗಲೇ,  ಇಂಥದ್ದೊಂದು ಸಂದೇಶ ಅವನಿಂದ ಬಮದಿದ್ದನ್ನು ನೋಡಿ ರಾತ್ರಿ ಕನಸಲ್ಲಿ ಅದೇ ಹುಡುಗನ ಕಂಡು ನಾಚಿ ಕೆಂಪಾಗಿದ್ದ ನನ್ನ ಮುಖ ಒಡನೆಯೇ ಕಪ್ಪಿಟ್ಟಿತ್ತು. ಮುನಿಸು, ಜಗಳ, ಅಳು ಇದ್ಯಾವುದಕ್ಕೂ ಆತ ಬಗ್ಗದಿದ್ದಾಗ 'ನಿನ್ನಿಷ್ಟ' ಎಂದೆ. ಆದರೆ ಮರುಕ್ಷಣ ಸದ್ದಿಲ್ಲದೇ ಉದುರಿದ್ದ ಕಣ್ಣೀರಿನ ಹನಿಗಳಲ್ಲೂ ಅವನ ಸ್ಪರ್ಶದ ಅನುಭೂತಿಯಿತ್ತು!
 
             ಅಂದಿನಿಂದ ಮೊಬೈಲ್ ಕಂಪನಿ ಮೆಸೇಜ್ ಹಾವಳಿಯಿಂದ ಸದ್ದಾದರೂ 'ಅವನೊಮ್ಮೆ ತಿರುಗಿ ಬಂದನಾ?!' ಎನ್ನುವ ಆಸೆಯೊಂದು ಮನದಲ್ಲಿ ಇಣುಕಿ ಮೊಬೈಲ್ ನೋಡಿದಾಗ ನಿರಾಸೆಯಾಗಿ ಕಣ್ತುಂಬುತ್ತಿತ್ತು. ರಾತ್ರಿಯ ಪಿಸುಮಾತುಗಳು ಕರಗಿ ಕಣ್ಣೀರಾಗಿ ದಿಂಬನ್ನು ತೋಯಿಸುತ್ತಿದ್ದವು. ನಿದ್ದೆಯಿಲ್ಲದೆ ಎದ್ದು ಕಿಟಕಿಯಾಚೆಗೆ ನೋಡುತ್ತಾ ರಾತ್ರಿಗಳನ್ನು ಕಳೆದ ದಿನಗಳೆಷ್ಟೋ ಲೆಕ್ಕವಿಲ್ಲ! ದಿನಗಳೆದಂತೆ ಮನಸ್ಸು ಕಲ್ಲಾಗಿ ಅವನನ್ನೇನೋ ಮರೆತೆ; ಆದರೆ ಅವನಿತ್ತು ಹೋದ ಸವಿನೆನಪುಗಳನ್ನಲ್ಲ!

        ಯಾರೋ ಒಬ್ಬ ಫೇಸ್ಬುಕ್ಕಿನಲ್ಲಿ ಹಾಯ್ ಎಂದ. ವಾಟ್ಸ್ ಆಪ್ ನಂಬರ್ ಕೇಳಿದವ ಇನ್ನೊಬ್ಬ. ಕಾಫಿಡೇ, ಸಿನಿಮಾ, ಶಾಪಿಂಗ್ಗಳು ಹೆಚ್ಚಾದವು. ಹಾಸ್ಟೆಲ್, ಸ್ನೇಹಿತರು, ಮಾತು-ಕತೆ, ಆತ್ಮೀಯತೆ ನನಗೆ ಪ್ರೀತಿಯಾಚೆಗಿನ ಜಗತ್ತನ್ನು ಪರಿಚಯಿಸಿದವು. ಹ್ಯಾಂಡ್ಸಮ್ ಹುಡುಗನ ಪೆದ್ದುಹುಡುಗಿ, ಕ್ಲಾಸ್ ಟಾಪರ್ ನ ದಡ್ಡತನ, ಪಕ್ಕದ ರೂಂ ಹುಡುಗಿಯ ತಾಜಾ ಲವರ ಸ್ಟೋರಿ, ಇವೆಲ್ಲವೂ ನಮ್ಮ ಸಾಯಂಕಾಲದ ಖಾಸ್ ಬಾತ್ ಗಳಾದವು.

        ಇವತ್ತು ಗೆಳತಿಯೊಬ್ಬಳು ಅದೇ ನನ್ನ ಹುಡುಗನ ಫೋಟೋ ತೋರಿಸಿ ತನ್ನ ಅವನ ಫೇಸ್ಬುಕ್ ವಾಟ್ಸ್ ಆಪ್ ಕಹಾನಿ ಹೇಳದಿರುತ್ತಿದ್ದರೆ ಅವನನ್ನು ನೆನಪೇ ಮಾಡಿಕೊಳ್ಳುತ್ತಿರಲಿಲ್ಲವೇನೋ! ಅವ ತನ್ನನ್ನು ಪ್ರೀತಿಸುವಂತೆ ದುಂಬಾಲು ಬೀಳುತ್ತಿರುವುದಾಗಿಯೂ, ತಾನಿನ್ನೂ ವೆಯ್ಟಿಂಗ್ ಲಿಸ್ಟ್ನಲ್ಲಿ ಇಟ್ಟಿರುವುದಾಗಿಯೂ ಹರಟುತ್ತಿದ್ದಳವಳು. ಏಕೋ ಅಲ್ಲಿರಲಾರದೆ ಎದ್ದುಬಂದಿದ್ದೆ ನಾನು.

       ಒಂಟಿಯಾಗಿ ತುಂತುರುಮಳೆಯನ್ನೇ ನೋಡುತ್ತಾ ನೆನಪಿನ ಜಾತ್ರೆಯಲ್ಲಿ ಕಳೆದುಹೋಗಿದ್ದೆ ಸ್ವಲ್ಪ ಹೊತ್ತು. ಅದೇ ಗೆಳತಿ ಓಡಿಬಂದು, "ಸುಚೀ, ನನ್ನ ವಿಜಿ ಮಧ್ಯೆ ಏನಿರಬಹುದೇ?!" ಎಂದಳು. ನಿರ್ಭಾವುಕತೆಯಿಂದ "ಜಸ್ಟ್ ಫ್ರೆಂಡ್ಶಿಪ್!" ಎಂದೆ! ಪ್ರಶ್ನಾರ್ಥಕವಾಗಿ ನೋಡುತ್ತಾ ಏನೋ ಕೇಳಲು ಮುಂದಾದವಳು ಮೊಬೈಲ್ನಲ್ಲಿನ ಅವನ ಕರೆಗೆ ಓಗೊಟ್ಟು ಓಡಿದಳು!

        ಮಂಜಾವರಿಸಿದ್ದ ಕಿಟಕಿಯ ಮೇಲೆ ಹಾಗೇ ಸುಮ್ಮನೆ ಅವನ ಹೆಸರು ಬರೆದೆ. ಬಿರುಸಾಗಿ ಬರುತ್ತಿದ್ದ ಮಳೆಗೂ, ಕಾಲಕ್ಕೂ ಅದನ್ನಳಿಸಲು ಸಾಧ್ಯವಾಗಲೇ ಇಲ್ಲ! ಏಕೆಂದರೆ ಆ ಹೆಸರು ನನ್ನ ಹೃದಯದಲ್ಲಿ ಅಚ್ಚೊತ್ತಿತ್ತು! ಮೋಸಮಾಡಿಹೋದ ವಿಜಿ ನನ್ನ ಲೆಕ್ಕದಲ್ಲಿ ಎಂದೋ ಸತ್ತು, ಒಂದಿಷ್ಟು ಮರೆಯಲಾಗದ ಮಧುರ ನೆನಪುಗಳನ್ನಿತ್ತ ವಿಜಿ ಮಾತ್ರ ನನ್ನ ಮನದಲ್ಲಿನ್ನೂ ಮನೆಮಾಡಿ ನಗುತ್ತಿದ್ದ!!