Wednesday, 21 October 2015

#Living_to'gather''

"ಮಧುವನ ಮೇ ಜೋ ಕನ್ಹಯ್ಯಾ ಕಿಸೀ ಕೋ ಪೀಸೆ ಮಿಲೇ
ಕಭಿ ಮುಸುಕಾಯೇ ಕಭೀ ಛೇಡೇ ಕಭೀ ಬಾತ್ ಕರೇ
ರಾಧಾ ಕೈಸೇ ನ ಜಲೇ? ರಾಧಾ ಕೈಸೇ ನ ಜಲೇ?"

          ಕಿವಿಗೆ ಇಯರ್ ಫೋನ್ಸ್ ಸಿಕ್ಕಿಸಿಕೊಂಡು ಹಾಡು ಕೇಳುತ್ತಾ ಯಮನಾ ತೀರದಲ್ಲಿ ಕುಳಿತು ಹುಣ್ಣಿಮೆ ಚಂದ್ರನನ್ನು ನೋಡುತ್ತಾ ನಿಟ್ಟುಸಿರಿಟ್ಟಳು ರಾಧೆ. ಮನೆಯಲ್ಲಿ ಈವನಿಂಗ್ ನ್ಯೂಸ್ ಅಪ್ಡೇಟ್ಸ್ ನೋಡುತ್ತಾ ಕುಳಿತಿದ್ದವಳಿಗೆ ಬೃಂದಾವನದಲ್ಲೆಲ್ಲೋ ಕೊಳಲಿನ ದನಿ ಕೇಳಿದಂತಾಗಿ ಯಮುನೆಯ ಸಮೀಪ ಬಂದವಳಿಗೆ ಯಾರೂ ಕಾಣದಾದಾಗ ಬೇಸರವಾಗಿತ್ತು.

           ರಾಧಾ ಚಿಕ್ಕವಳಿದ್ದಾಗ ಗೋಕುಲದ ಡೈರಿ ಪ್ರಾಡಕ್ಟ್ಸ್ ಅಸೋಸಿಯೇಷನ್ನಿನ ಇನ್-ಚಾರ್ಜ್ ನಂದ-ಯಶೋಧೆಯರಿಗೆ ಕೃಷ್ಣನೆಂಬ ಮಗುವಾದಾಗಲೂ ಕೃಷ್ಣ-ರಾಧಾ ಕ್ಲೋಸ್ ಫ್ರೆಂಡ್ಸ್. ಫ್ರೆಂಡ್ಶಿಪ್ ಪ್ರೀತಿಗೆ ತಿರುಗಿ ಡೇಟಿಂಗ್, ಕೊನೆಗೆ ಎಷ್ಟೋ ವರ್ಷಗಳ ಲಿವಿಂಗ್ ಟುಗೆದರ್ ರಿಲೇಷನ್ಷಿಪ್. ಕೃಷ್ಣ ಯಾವಾಗಲೂ ಜೊತೆಯಲ್ಲಿಯೇ ಇರುವಾಗ ಮದುವೆ-ಬಂಧ-ಸಂಬಂಧಗಳೇಕೆ ಎಂದು ಅವಳೂ ತಲೆಕೆಡಿಸಿಕೊಂಡಿರಲಿಲ್ಲ.

         "ಹೇ ರಾಧಾ? ವ್ಹಾಟ್ ಆರ್ ಯೂ ಡುಯಿಂಗ್ ಹಿಯರ್?" ಗೆಳತಿಯ ಮಾತು ಕೇಳಿ ಕಣ್ಣಂಚಿನ ನೀರು ಅವಳಿಗೆ ಕಾಣದಂತೆ ಒರೆಸಿಕೊಂಡು "ಸಿಂಪ್ಲೀ ಸಿಟ್ಟಿಂಗ್ ಡಿಯರ್..." ಎಂದಳು ಎಲ್ಲೋ ನೋಡುತ್ತಾ. 'ಕೃಷ್ಮನ ನೆನಪಾಯ್ತೇನೇ? ಆರ್ ಯೂ ಮಿಸ್ಸಿಂಗ್ ಹಿಮ್?!' ಎಂದು ತಲೆ ನೇವರಿಸುತ್ತಾ ಕೇಳಿದ ಗೆಳತಿಯ ಎದುರು ಭಾವನೆಗಳ ಬಟ್ಚಿಡಲಾರದೆ "ಕೊಬ್ಬು ಕಣೇ ಅವನಿಗೆ. ಅವನು ಮಥುರಾಗೆ ಹೋದ ಮೇಲೆ ಎಷ್ಟು ಸಾರಿ ಫೋನ್ ಮಾಡಿಲ್ಲ ನಾ ಅವನಿಗೆ? ರಿಜೆಕ್ಟ್ ಲಿಸ್ಟ್ ಗೆ ಹಾಕಿರಬೇಕು-ನನ್ನ ನಂಬರ್ ಜೊತೆ ನನ್ನನ್ನೂ! ವಾಟ್ಸ್ ಆಪ್ ಅಲ್ಲಿ ಕಳಿಸಿದ ಮೆಸೇಜುಗಳಿಗೆ ಲೆಕ್ಕವಿಲ್ಲ. ಆನ್ಲೈನ್ ಲಿದ್ದರೂ ರಿಪ್ಲೈ ಮಾಡಲ್ಲ. ಸ್ಟೇಟಸ್ ನೋಡಿದ್ದೀಯಾ ಅವನದ್ದು? 'ಬ್ಯುಸಿ ಅಪ್ ವರ್ಕ್' ಅಂತೆ. ಒಂದ್ಹತ್ತು ನಿಮಿಷ ಚಾಟ್ ಮಾಡಿದ್ರೆ ಅವನ ಗಂಟೇನು ಹೋಗುತ್ತಂತೆ?!"

       
" ರಾಧಾ, ಒಮ್ಮೆ ಹೋದ ಅವನು ಹಿಂದಿರುಗಿ ಬರುವುದಿಲ್ಲ. ನೀನವನ ಬಗ್ಗೆ ಯೋಚಿಸಿ ಯೂಸ್ ಇಲ್ಲ ಕಣೇ. ಹೀ ಈಸ್ ಅ ಗ್ರೇಟ್ ಪರ್ಸನ್. ಯಾರೂ ಯೋಚಿಸದ ಮಟ್ಟಕ್ಕೆ ಬೆಳೀತಿದ್ದಾನೆ ಅವ್ನು. ಯೂ ನೋ? ಮಥುರಾಗೆ ಕಾಂಪಿಟಿಷನ್ನಿಗೆ ಹೋದ ಅವನು ಕಂಸನನ್ನು
 ಕೊಂದಿದ್ದಾನಂತೆ. ಕಂಸ ಅವನ ಸೋದರಮಾವನಂತೆ. ನಿನ್ನೆ ತಾನೇ YouTubeನಲ್ಲಿ ಅವ ಕಂಸನನ್ನು ಕೊಂದ ವೀಡಿಯೋ ನೋಡಿದೆ ಕಣೇ. Ultimate fighting! "

          ಗೆಳತಿಯ ಮಾತನ್ನು ಕೇಳಿಸಿಕೊಳ್ಳುತ್ತಲೇ ಫೇಸ್ಬುಕ್ ಗೆ ಲಾಗಿನ್ ಆಗಿದ್ದಳು ರಾಧೆ. ನ್ಯೂಸ್ ಫೀಡ್ನಲ್ಲಿ ಕೃಷ್ಣ-ರುಕ್ಮಿಣಿ-ಸತ್ಯಭಾಮಾರ ಫೋಟೋ, "ಮಿ ವಿದ್ ಮೈ ಸ್ವೀಟ್ ಹಾರ್ಟ್ಸ್" ಟ್ಯಾಗ್ಲೈನ್ ನೋಡಿ 'ಈ ರಾಧೆಗಿಂತಾ ಸುಂದರಿಯರೇನೇ ಆ ಬಿನ್ನಾಣಗಿತ್ತಿಯರು?' ಎಂದು ಕೇಳುತ್ತಾ ಮೂತಿ ತಿರುವಿದಳು. ನಿರುತ್ತರಳಾದಳು ಅವಳ ಸ್ನೇಹಿತೆ.

         'ನನ್ನ ಕೃಷ್ಣ ಎಷ್ಟೇ ದೊಡ್ಡ ವ್ಯಕ್ತಿ ಆಗಿರಲಿ, ಆಗಲಿ, ನನಗವನು ಯಾವಾಗಲೂ ಪುಟ್ಟ ಮಗು ಕಣೇ. ಅವನನ್ನು ನನ್ನ ಮಗುವಿನಂತೆ ಪ್ರೀತಿಸಿದೆ; ಗಂಡನಂತೆ ಮುದ್ದಿಸಿದೆ. ಆ ಹದಿನಾರು ಸಾವಿರದೆಂಟು ಹೆಂಡತಿಯರ ಜೊತೆ ನನ್ನನ್ನೂ ಪತ್ನಿಯಾಗಿಸಿಕೊಳ್ಳಬಹುದಿತ್ತಲ್ಲ?! ನಾನೊಬ್ಬಳು ಹೆಚ್ಚೇ ಅವನಿಗೆ? ಲಿವಿಂಗ್ ಟುಗೆದರ್ ರಿಲೇಷನ್ಶಿಪ್ ಸೇಫ್ ಅಲ್ಲ. ಜೀವನದುದ್ದಕ್ಕೂ ಸಂಗಾತಿ ಜೊತೆಗಿರಬೇಕು ಎಂದರೆ ಮದುವೆ ಎನ್ನುವ ಲೈಸೆನ್ಸ್ ಬೇಕೇ ಬೇಕು ಎಂದು ಈಗ ಅರ್ಥವಾಗಿದೆ ನನಗೆ. ಸರಿ, ನಡಿ, ಮನೆಗ್ಹೋಗೋಣ. ಆಲ್ರೆಡಿ ತುಂಬಾ ಲೇಟಾಗಿದೆ' ಎನ್ನುತ್ತಾ ಮನೆ ಕಡೆ ಮುಖ ಹಾಕಿದಳು ರಾಧೆ. ಮನದಲ್ಲಿ ಗೆಳತಿ ಹೇಳಿದ ಮಾತು ಪ್ರತಿಧ್ವನಿಸುತ್ತಿದ್ದ ಸಮಯದಲ್ಲೇ ವಾಟ್ಸ್ ಆಪ್ ಗೆ ಬಂದು ಕುಳಿತಿದ್ದ 'ನೈಸ್ ಡಿಪಿ ಡಿಯರ್' ಎಂಬ ಸೋದರಮಾವನ ಮೆಸೇಜು ಕಂಡು ಏಕೋ ನಾಚಿದಳು!!!

Sunday, 4 October 2015

ತೆರೆದ ಕಿಟಕಿ



(ಮೊದಲ-ತೊದಲ ಬರಹ :)
       ಅರ್ಪಣೆ: ಬದುಕಿನ ಪಾಠಗಳನ್ನು, ಬದುಕನ್ನು ಪ್ರೀತಿಸುವುದನ್ನು ಕಲಿಸಿದ ಅಪ್ಪನಿಗೆ, ಅಪ್ಪನಂತೆ ಮುದ್ದಿಸಿ ಕಣ್ಣೀರೊರೆಸಿದ ಅಣ್ಣನಿಗೆ, ಸಾಹಿತ್ಯವನ್ನು ಬದುಕಿನ ಭಾಗವಾಗಿಸಿಕೊಳ್ಳಲು ಹುರಿದುಂಬಿಸಿ, ಈ ಕಥೆಯಿಂದ ಸಾಹಿತ್ಯ ಪಯಣಕ್ಕೆ ಮುನ್ನುಡಿ ಬರೆಸಿದ ಗುರುಶ್ರೇಷ್ಠರಿಗೆ! :) )
(Re posting the old one. ಸ್ಮಾರ್ಟ್ ಫೋನ್ ಗಳು ಮನುಷ್ಯರ status ಅನ್ನು depict ಮಾಡುವ ಕಾಲ ಇನ್ನೂ ಬಂದಿರದ ಸಮಯದಲ್ಲಿ, ಮೊಬೈಲ್ allow ಇಲ್ಲದ ಹಾಸ್ಟೆಲಿನಲ್ಲಿದ್ದು PUC ಶಿಕ್ಷಣ ಮುಗಿಸುವಾಗ ವಾರಕ್ಕೊಮ್ಮೆ ಬರುವ ಅಮ್ಮನ ಫೋನ್ ಗೆ ಜಾತಕಪಕ್ಷಿಯಂತೆ ಕಾದು ಕುಳಿತುಕೊಳ್ಳುತ್ತಿದ್ದ ಕಾಲದಲ್ಲಿ ಬರೆದ ಕಥೆಯಿದು. )

 

        ಅದಿತಿ ಈ ವಾರ ಹಾಸ್ಟೆಲಿನಲ್ಲಿ ಇರಲೇಬೇಕಾದ ಅನಿವಾರ್ಯತೆಯೂ, ಜೊತೆಗೆ ಹೊಸವರ್ಷದ ಸಂಭ್ರಮಾಚರಣೆಯೂ ಇದ್ದುದರಿಂದ ಅನಿವಾರ್ಯವಾಗಿ ಮನೆಗೆ ಹೋಗಲಾರದ ಸ್ಥಿತಿಯಲ್ಲಿದ್ದಳು. ಅವಳ ಸ್ಮೃತಿಪಟಲದ ತುಂಬೆಲ್ಲಾ ಮನೆಯ ಚಿತ್ರಣವೇ. ಗಟ್ಟಿಮನಸ್ಸು ಮಾಡಿಕೊಂಡು ಹಾಸ್ಟೆಲಿನಲ್ಲಿದ್ದರೂ ಮನೆಯೆಡೆಗಿನ ಸೆಳೆತವನ್ನೂ, ಮನದ ತುಡಿತವನ್ನೂ ತಡೆಯಲಾರದ ಸ್ಥಿತಿಯಲ್ಲಿ ಅವಳಿದ್ದಳು. ಜೊತೆಗೆ ರೂಮ್-ಮೇಟ್ಸ್ ಜೊತೆಗಿನ ವೈಮನಸ್ಸು ಕೂಡ ಹಾಸ್ಟೆಲಿನಲ್ಲಿರಲು ಪ್ರತಿರೋಧವನ್ನೊಡ್ಡುತ್ತಿತ್ತು.

         ಕೊನೆಗೂ ಮನದಲ್ಲಿನ ತಳಮಳವನ್ನು ನಿಯಂತ್ರಿಸಲಾರದೆ ಮನೆಗೆ phone ಮಾಡಿ ಬರಲು ಹೋದಳು. ಫೋನ್ ರಿಂಗಾಗುತ್ತಿದ್ದಂತೆ ಆಕೆಯ ಮನಸ್ಸು ಅದಾಗಲೇ ಮುಂದಿನ ಸಂಭಾಷಣೆಗೆ ಸಜ್ಡಾಗುತ್ತಿತ್ತು.ಫೋನ್ ನಲ್ಲಿ ಅಪ್ಪನ ಮಾತನ್ನು ಕೇಳಲು ಬಯಸಿದ್ದವಳಿಗೆ ಅಮ್ಮ 'ಹಲೋ' ಎಂದಾಗ ಕೊಂಚ ಬೇಸರವಾದರೂ ತೋರಗೊಡದೆ, "ಹಲೋ ಅಮ್ಮಾ, ನಾನು ಅದಿತಿ. ಅಪ್ಪ ನಾಳೆ ಸಾಗರಕ್ಕೆ ಬರ್ತಾರಾ??" ಎಂದು ಕೇಳಿದಳು. ಆಕೆಯ ಅಮ್ಮ "ಏಕೆ? ಅಪ್ಪ ಬರುವವು ತಿಳಿದಿಲ್ಲ. ನಾನು ಬಂದರೆ ಆಗಬಹುದಾ? ನಾನು ಹೇಗೂ ಸಾಗರಕ್ಕೆ ಬರ್ತಾ ಇದ್ದೀನಿ, ಹಾಗೇ ಹಾಸ್ಟೆಲಿಗೆ ಬಂದು ನಿನ್ನ ನೋಡಿ ಹೋಗ್ತೀನಿ" ಎಂದಾಗ ಅದಿತಿ "ನೀ ಬರುವುದು ಬೇಡ. ಅಪ್ಪನನ್ನೇ ಬರಲಿಕ್ಕೆ ಹೇಳು. ಹಾಗೇ ನನಗೆ ತಿನ್ನಲು ಏನಾದರೂ ಕೊಟ್ಟು ಕಳುಹಿಸು. ಮತ್ತೇ........" ಎಂದು 'ಬೇಕು'ಗಳ ಉದ್ದಪಟ್ಟಿಯನ್ನು ಅಮ್ಮನ ಮುಂದಿರಿಸಿ ಅದನ್ನು ಅಪ್ಪನ ಕೈಯಲ್ಲೇ ಕಳುಹಿಸುವಂತೆ ಫರ್ಮಾನು ಹೊರಡಿಸಿದಳು.

       ಅಬ್ಬ! ಆ ಖುಷಿಯಲ್ಲಿ ರಾತ್ರಿಯನ್ನು ಅದ್ಹೇಗೆ ಕಳೆದು ಬೆಳಗಿನ ಸೂರ್ಯನನ್ನು ಕಂಡಳೋ ಆಕೆಗೇ ತಿಳಿಯದು. ಆಕೆಯ ಮನಸ್ಸು ನಿಯಂತ್ರಣದಲ್ಲಿಯೇ ಇರಲಿಲ್ಲ. ಬೆಳಗ್ಗೆ ಎದ್ದ ಕೂಡಲೇ ಲವಲವಿಕೆಯಿಂದ ಬಹುಬೇಗ ತಯಾರಾಗಿ, ತನ್ನ ಅಪ್ಪ ಇಷ್ಟಪಟ್ಟು ತಂದಿದ್ದ ಕೆಂಪು ಬಣ್ಣದ ಅನಾರ್ಕಲಿ ತೊಟ್ಟು ಖುಷಿಯಿಂದ ಕಾಲೇಜಿನತ್ತ ಹೆಜ್ಜೆ ಹಾಕಿದಳು. 'ಅಪ್ಪ ಬಂದಾಗ ಮಾರ್ಕ್ಸ್ ಕಾರ್ಡ್ ತೋರಿಸಬೇಕು, ಆವತ್ತು ಅಪ್ಪ ಇಲ್ಲದಾಗ ಅಮ್ಮ ಬೈದಿದ್ದಳಲ್ಲಾ, ಅದನ್ನು ಅಪ್ಪನಿಗೆ ಹೇಳಿ ಅಮ್ಮನಿಗೆ ಸರಿಯಾದ ಶಾಸ್ತಿ ಮಾಡಿಸ್ಬೇಕು, ಅದೇ ಮಧುರಾ ಹೋಟೆಲ್ ಗೆ ಹೋಗಿ ಬೆಣ್ಣೆದೋಸೆ ತಿಂದುಬರಬೇಕು'-ಇನ್ನೂ ಏನೇನೋ ಯೋಚನೆಗಳು ಅವಳ ಮನಸ್ಸಿನಲ್ಲಿ. ಈ ಎಲ್ಲಾ ಯೋಚನೆಗಳ ನಡುವೆ ಪಕ್ಕದಲ್ಲಿದ್ದ ಗೆಳತಿ ತಿವಿದಾಗಲೇ ಅವಳಿಗೆ ಕಾಲೇಜು ಹತ್ತಿರ ಬಂದದ್ದು ತಿಳಿದಿದ್ದು!

          ತರಗತಿ ನಡೆಯುತ್ತಿದ್ದರೂ, ಶಿಕ್ಷಕರು ಅವರ ಪಾಡಿಗವರು ಏನೋ ಹೇಳುತ್ತಲೇ ಇದ್ದರೂ, ಅದಿತಿಯ (ಗ) ಮನ ಮಾತ್ರ ಕಿಟಕಿಯೆಡೆಗೆ, ಅದರಾಚೆಗಿನ ರಸ್ತೆಯೆಡೆಗೇ ಇತ್ತು. ಅಪ್ಪನ ಬರುವಿಕೆ, ಬಹಳ ದಿನಗಳಾದ ನಂತರ ಅವರನ್ನು ನೋಡುತ್ತಿರುವ ಖುಷಿ ಅವಳಿಗೆ ಪ್ರಪಂಚವನ್ನೇ ಮರೆಸಿತ್ತು. ಪ್ರತಿ ತರಗತಿ ಮುಗಿದಾಗಲೂ ಅಪ್ಪ ಬಾರದಾಗ ಬೆಸರವಾದರೂ, 'ಏನೋ ಕೆಲಸವಿರಬೇಕು, ಅಂತೂ ಇವತ್ತು ಅಪ್ಪ ಬಂದೇ ಬರ್ತಾರೆ' ಎನ್ನುವ ಆಸೆ ಬೇಸರದ ಹೊದಿಕೆಗೆ ತೇಪೆಹಾಕಿತ್ತು.

           ಆದರೆ, ಕ್ಲಾಸ್ ಮುಗಿಸಿ ಬರುತ್ತಿದ್ದ ಅದಿತಿಯ ಕಣ್ಣು ತೇವವಾಗಿತ್ತು. ಅಪ್ಪನಿಗಾಗಿ ನಿರೀಕ್ಷೆಯಿಂದ ಕಾದಿದ್ದ ಅವಳಿಗೆ ನಿರಾಸೆಯಾಗಿತ್ತು. ಸಿಟ್ಟಿನಿಂದ ಅಲ್ಲೇ ಹತ್ತಿರದಲ್ಲಿದ್ದ telephone boothನಿಂದ ಮನೆಗೆ ಫೋನ್ ಮಾಡಿ ಅಮ್ಮನಿಗೆ ಬೈದು 'ನೀನೇ ಅಪ್ಪನನ್ನು ಬರದಂತೆ ತಡಿದಿರಬೇಕು' ಎಂದು ಕೋಪಿಸಿಕೊಂಡು ಫೋನಿಟ್ಟಳು. ನಂತರ ನೇರವಾಗಿ ಅಪ್ಪನಿಗೆ ಫೋನ್ ಮಾಡಿದಾಗ ಅಪ್ಪನ ಫೋನ್ switched off ಎಂದು ಕೂಗುತ್ತಿತ್ತು. ಇನ್ನೂ ಸಿಟ್ಟುಬಂದರೂ ಮನದ ಮೂಲೆಯಲ್ಲೆಲ್ಲೋ ಭಯವಾಗತೊಡಗಿತ್ತು. ಮನಸ್ಸು ಅಪಶಕುನದ ಮುನ್ಸೂಚನೆಯನ್ನು ಕೊಡುತ್ತಿತ್ತು. ಹೃದಯಬಡಿತ ಜೋರಾಗತೊಡಗಿತ್ತು. ಬಲಗಣ್ಣು ಅದುರುತ್ತಿತ್ತು.

    ಆದರೂ ತನ್ನಪ್ಪನಿಗೆ ಏನೂ ಆಗಿರಲಾರದೆಂದು ತನಗೆ ತಾನೇ ಧೈರ್ಯ ಹೇಳುತ್ತಾ, ಸ್ನೇಹಿತೆಯಲ್ಲಿ ಅಪ್ಪನನ್ನು ಬೈಯತೊಡಿಗಿದಳು. ಆಕೆ ಅದಿತಿಯನ್ನು ಸಮಾಧಾನಿಸುತ್ತಿದ್ಧಳು. ಮಾರ್ಗದಲ್ಲಿ ಬರುತ್ತಿದ್ದಾಗ ಒಂದೆಡೆ ಜನಸಮೂಹವೇ ನೆರೆದಿತ್ತು. ಹೇಗೋ ನುಸುಳಿಕೊಂಡು ಹೋಗಿ ನೋಡಿದಾಗ ದೊಡ್ಡದೊಂದು ಆಘಾತ ಅದಿತಿಗಾಗಿ ಕಾದಿತ್ತು. ತನ್ನ ಜೀವವಾಗಿದ್ದ, ಜಗತ್ತಿನ ಎಲ್ಲಕ್ಕಿಂತ ಪ್ರಿಯವಾಗಿದ್ದ, ಜಗತ್ತೇ ಆಗಿದ್ದ ತನ್ನದೇ ಅಪ್ಪ ನಿಸ್ತೇಜರಾಗಿ, ನಿರ್ಜೀವವಾಗಿ ರಸ್ತೆಯಲ್ಲಿ ಬಿದ್ದಿದುದನ್ನು ಕಂಡು ಆಕೆ ದಿಗ್ಭ್ರಾಂತಳಾಗಿದ್ದಳು. ಅವಳು ತರಲು ಹೇಳಿದ್ದ ವಸ್ತುಗಳು, ಮೊಬೈಲ್ ಫೋನ್ ನೆಲದ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ದೇಹ ಬಸ್ಸಿನಡಿಗೆ ಸಿಲುಕಿ ಗುರುತೇ ಸಿಗದಷ್ಟು ನುಜ್ಜುಗುಜ್ಜಾಗಿತ್ತು. ಏಕೋ ತಲೆಸುತ್ತು ಬಂದಂತಾಯ್ತು. ಆಮೇಲೇನಾಯ್ತೋ ಆಕೆ ಅರಿಯಳು......

      ಇಂದಿಗೂ, ಈ ಕ್ಷಣಕ್ಕೂ, ರಸ್ತೆಯಲ್ಲಿ ಯಾವ ಬೈಕು ಓಡಾಡಿದರೂ ಅದಿತಿಯ ಕಣ್ಣು ಅದನ್ನು ಹಿಂಬಾಲಿಸುತ್ತದೆ. ತನ್ನ ಅಪ್ಪ ಬಂದೇಬಿಟ್ಟರು ಎಂಬ ಉತ್ಸಾಹದಿಂದ ಎದ್ದಾಗ ಹಳೆಯದೆಲ್ಲಾ ನೆನಪಾಗಿ ಮತ್ತೆ ಕುಸಿದು ಬೀಳುತ್ತಾಳೆ. ಅವಳ ಪಕ್ಕದ ಕಿಟಕಿ ಎಂದಿಗೂ ತೆರೆದೇ ಇದೆ. ಅದರಲ್ಲಿ ಒಮ್ಮೆಯಾದರೂ ಅಪ್ಪ, ಅಪ್ಪನ ಬೈಕು ಕಾಣಬಹುದೆಂಬ ಮಹದಾಸೆಯಿಂದ......!!