Friday, 8 May 2015

ಸರಸೀ....!!

         



ಕೊಟ್ಟುಹೋಗು ನೆನಪುಗಳ
ಪ್ರತೀ ಕ್ಷಣ ನೆನಪಾಗುವಷ್ಟು;
ನೆನಪಾದರೆ ಮೈ ಜುಮ್ಮೆನಿಸುವಷ್ಟು!
ಇನ್ಯಾವತ್ತೂ ಮರೆಯಲಾರದಷ್ಟು!!



ಜೇನ ಹೀರಬೇಕೆನಿಸಿದೆ ಗೆಳತೀ...
ಕಚ್ಚಲೇ ನಿನ್ನ ಕೆನ್ನೆ?!
ನಾಚುತಂದಳವಳು
'ಊಟ' ಸಾಲದಾಯಿತೇ ನಿನ್ನೆ?!


"ನೀನೇ ನನ್ನ ಮನದರಸಿ ಚಿನ್ನಾ"
ಎಂದವಗೆ ಬರಿಗೈಯ ತೋರಿಸಿ
ತಲೆಯ ಮೊಟಕುತ್ತ ಅಂದಳವಳು-
'ಯೋಚಿಸಿ ಮಾತನಾಡಿ ಇನ್ನೊಮ್ಮೆ
ನನ್ನ ಚಿನ್ನ ಎನ್ನುವ ಮುನ್ನ!


ಸರಸದೋಕುಳಿಯಲಿ ಮಿಂದ
ಸರಸಿಯ ಮನದಲ್ಲಿ
ಸರಸಿಜಾಕ್ಷನ ನೆನಪು!
ಮುನ್ನಾ ದಿನದಾಟಕೆ ಬಳಲಿದವಳ ಮುಖದಲ್ಲೂ
ಮತ್ತೆ ಮೂಡಿತು ಹುರುಪು!!


'ಸರಸ'ದ ಸಮಯಕ್ಕಿಂತ
ವಿರಸದಲ್ಲೇ ಸರಸಿಯ ನೆನಪು
ಅತಿಯಾಗಿ ಕಾಡುವುದು...;
ಕೈಗುಟಕದ ದ್ರಾಕ್ಷಿ ಹುಳಿಯಾದರೂ
ಸಿಗಲಾರದೆಂಬುದೇ ಶಾಶ್ವತನೋವು!!


ನಲ್ಲನ ಪ್ರಣಯದಾಟಕೆ ಸೋತವಳ
ಮನಸೆಲ್ಲಾ ಮಬ್ಬು-ಮಬ್ಬು;
ಆಕೆಯ ತುಟಿಯಂಚಿನ ಗಾಯ ಕಂಡು
ಕನ್ನಡಿಯು ಹಾರಿಸಿತು ಹುಬ್ಬು! :-P

ಸರಿರಾತ್ರಿ ಹೊತ್ತಲ್ಲಿ ಕುತ್ತಿಗೆಗಿತ್ತ
ಮುತ್ತಿಗೊಂತು ಮುತ್ತು ಸೇರುತ್ತ
ಏರಿತ್ತು ಮತ್ತು....
ಗಮ್ಮತ್ತಿನಿರುಳ ನೆನಪಿನ ಮತ್ತಲ್ಲೇ
ಸರಿದೋಯ್ತು ಮೂರು ಹೊತ್ತು!!


ಸರಸೀ.....
ಎಲ್ಲಾ ಆರೋಪ-ಪ್ರತ್ಯಾರೋಪಗಳಲ್ಲಿ ಬ್ಯುಸಿ
 ;-)
ಉಪಕಾರ ಮಾಡು-ಈ ಹವ್ಯಕ ಗ್ರೂಪ್ ಸಾರಿಸಿ; :-P
ಕಡಿಮೆಗೊಳಿಸಿ ಎಲ್ಲರ ತಲೆಬಿಸಿ :-)


ಕನಸು ಕಾಣೆಯಾಗಿದೆ
ನನ್ನ ಮನಸ್ಸು ಖಾಲಿಯೆನಿಸಿದೆ...
ನೀನಿರದ ಈ ಸಂಜೆಯಲಿ
ಈ ಹೃದಯ ಬಿಕರಿಯಾಗಿದೆ-
ಹಳೆಯ ದುಬಾರಿ ನೆನಪುಗಳ
ಸಾಲದ ಹಾವಳಿಗೆ....


(ಹವ್ಯಕ- ಫೇಸ್ಬುಕ್ ಗ್ರೂಪಿನಲ್ಲಿ 'ಸರಸೀ' ಪೋಸ್ಟ್ ಅಲ್ಲಿ ಮಜಕ್ಕೆ ಬರೆದ ಹನಿಗವನಗಳು!! :-) )

Monday, 4 May 2015

ಕಾಯುತಿಹಳು ರಾಧೆ!


ಕಾಯುತಿಹಳು ರಾಧೆ
ಬೃಂದಾವನದಿ ಕೊಳಲಿನ ದನಿಗಾಗಿ;
ನೀಲಮೇಘಶ್ಯಾಮನ ನೆರಳಿಗಾಗಿ
ತೀರದ ವಿರಹದುರಿಯ ಶಮನಕಾಗಿ


ಕಾಯುತಿಹಳು ರಾಧೆ
ಜನುಮದಾಳದ ಪ್ರೀತಿಸುಧೆಯ 
ನೆನೆನೆನೆದು ಪುಳಕಿತಳಾಗುತ್ತಾ....
ಗತವೈಭವದ ಪುನರಾವರ್ತನೆಯ
ಸವಿಗನಸಿನೊಂದಿಗೆ ನಿಡುಸುಯ್ಯುತ್ತಾ...


ಕೃಷ್ಣನಿಗೋ ರಾಜಕಾರಣದ ಯೋಚನೆ
ಲೋಕಕಲ್ಯಾಣದ ಚಿಂತೆ
ಬಂಧು-ಬಾಂಧವರ ಸೌಹಾರ್ದತೆಯ
ಕಾಪಿಟ್ಟುಕೊಳ್ಳುವ ಜವಾಬ್ದಾರಿ;
ಭವಿತವ್ಯದ ಸುಭದ್ರತೆಯ ತಯಾರಿ!


ಪಟ್ಟದರಸಿ ರುಕ್ಮಿಣಿಯಿರುವಾಗ
ಇಷ್ಟದರಸಿ ಭಾಮೆಯ ತೋಳತೆಕ್ಕೆಯಿರುವಾಗ
ಬಯಸಿದಾಗ ನಿದ್ರಿಸಲು ದೇವಕಿಯ ಮಡಿಲಿರುವಾಗ 
ಇಷ್ಟಾನಿಷ್ಟಗಳ ನೋಡಿಗೊಳ್ಳಲು
ಹದಿನಾರು ಸಾವಿರ ಗೆಳತಿಯರಿರುವಾಗ...,
ರಾಧೆಯೊಬ್ಬಳೇ ಜೀವನವೇ?!


ಇದ ತಿಳಿದರೂ ಕಾಯುತ್ತಲೇ ಇರುವಳು ರಾಧೆ
ಸಾಧ್ಯಾಸಾಧ್ಯತೆಗಳ ತೀರವ ದಾಟಿ!
ಮತ್ತೆ ತನ್ನ ಹೃದಯವೀಣೆಯ ಮೀಟಿ
ಬಾಡಿರುವ ಹೂವಿಗೆ ಗಂಧ
ತುಂಬುವ ಅದೇ ನಂದನ ಕಂದನಿಗಾಗಿ!!