ಈ ಸೀತೆ ಎಂದೆಂದಿಗೂ ಎಲ್ಲವೂ ಇದ್ದೂ ಏನೂ ಇಲ್ಲದಂತೆ ಬಾಳಿದಳು.ಒಂದು ವರ್ಷ ಲಂಕೆಯಲ್ಲಿ ಹಾಗೂ ಹದಿನಾಲ್ಕು ವರ್ಷ ವಾಲ್ಮೀಕಿ ಮಹರ್ಷಿಗಳ ಆಶ್ರಮದಲ್ಲಿ-ಒಟ್ಟು ಹದಿನೈದು ವರ್ಷಗಳನ್ನು ಸನ್ಯಾಸಿನಿಯಾಗಿಯೇ ಕಳೆದಳು; 'ರಾಮ'ನಂತಹ ರಾಮ ಗಂಡನಾಗಿದ್ದರೂ ಸಹ. ಪರಮಪೂಜ್ಯ, ಪತಿತಪಾವನ ರಾಮನಿದ್ದರೂ ಒಂಟಿಯಾಗಿಯೇ ಬಾಳಿದಳು.
----------------------------
ಆ ದಿನ ಕೈಕೆಯ ಕುತಂತ್ರದಿಂದಾಗಿ, ಪಟ್ಟಭಿಷಿಕ್ತನಾಗಿ ಚಕ್ರವರ್ತಿಯಾಗಿ ಬಾಳಬೇಕಿದ್ದ ನೀನು ನಾರುಮಡಿಯುಟ್ಟು ವನವಾಸಕ್ಕೆ ಹೋಗಬೇಕಾಗಿ ಬಂತು. ಕೌಸಲ್ಯಾಮಾತೆ, ಮಾತೆ ಸುಮಿತ್ರಾದೇವಿ, ಗುರು ವಸಿಷ್ಠರು, ಸೋದರಿ ಊರ್ಮಿಳಾ... ಕೊನೆಗೆ ನೀನೇ ಬೇಡವೆಂದರೂ ನಿನ್ನ ಜೊತೆ ನಡೆದುಬಂದೆ. ಬಲಿಷ್ಠ ಅಯೋಧ್ಯಾ ಸಾಮ್ರಾಜ್ಯವನ್ನು ಬಿಟ್ಟು ನಿನ್ನ ಮನದನ್ನೆಯಾಗಿರಬಯಸಿದೆ. ಅಯೋಧ್ಯೆಯಲ್ಲಿ ಸಿರಿ-ಸಂಪತ್ತಿತ್ತು; ಅಷ್ಟೈಶ್ವರ್ಯವಿತ್ತು. ಹೇಳಿದ್ದನ್ನು ಮಾಡಲು ಸೇವಕರಿದ್ದರು; ಕಾಲ ಕಳೆಯಲು ನಾನು ಮಿಥಿಲೆಯೆಂದ ಬರುವಾಗ ನನ್ನೊಡನೆ ಬಂದ ಸಖಿಯರೂ, ಅಯೋಧ್ಯೆಯಲ್ಲಿ ಪರಿಚಯವಾದ ಸಖಿಯರೂ ಇದ್ದರು. ಅಷ್ಟೇ ಏಕೆ, ಸಹೋದರಿ ಊರ್ಮಿಳೆಯೇ ಜೊತೆಗಿದ್ದಳು. ಆದರೂ ಇವೆಲ್ಲವನ್ನೂ ನಿನಗಾಗಿ, ನಿನ್ನ ಪ್ರೀತಿಗಾಗಿ ತ್ಯಜಿಸಿ ನಿನ್ನ ಹಿಂದೆ ಓಡೋಡಿ ಬಂದೆ ರಾಮ. ಆದರೆ ಇದಕ್ಕೆ ಪ್ರತಿಫಲವಾಗಿ ತಕ್ಕ ಶಾಸ್ತಿಯನ್ನೇ ಮಾಡಿದೆ ನೀನು. ನಾನು ರಾವಣನ ಅರಮನೆಯಲ್ಲಿ ಸೆರೆಯಾಗಿ ಇದ್ದಷ್ಟೂ ದಿನ ನೀನೂ ಒಂಟಿಯಾಗಿಯೇ ಇರಲಿಲ್ಲವೇ? 'ನೀನು ಏಕಪತ್ನೀವ್ರತಸ್ಥನೆಂದು ಹೇಗೆ ಸಾಬೀತುಪಡಿಸುತ್ತೀ?' ಎಂದು ಒಂದೊಮ್ಮೆ ನಾನೇ ಕೇಳಿದ್ದರೆ ನಿನ್ನಲ್ಲಿ ಉತ್ತರವಿತ್ತೇ ರಾಮ?
----------------------------
ವಾಲ್ಮೀಕಿ ಮಹರ್ಷಿಗಳಾಶ್ರಮದಲ್ಲಿ, ಈ ಹದಿನಾಲ್ಕು ವರ್ಷಗಳ ಕಾಲ ನಿನ್ನ ನೆನಪಲ್ಲೇ ನನ್ನ ಜೀವನವನ್ನು ಸವೆಸಿದ್ದೆ ರಾಮ. ಲವ-ಕುಶರ ತಾಯಿಯಾಗಿ ಅವರ ಆಟ-ಪಾಠಗಳಲ್ಲಿ ನನ್ನ ನೋವನ್ನು ಮರೆಯುತ್ತಿದ್ದೆ. ಮಕ್ಕಳು ಬಂದು "ಅಮ್ಮಾ ನಮ್ಮ ತಂದೆ ಯಾರು? ಎಲ್ಲಿದ್ದಾರೆ?" ಎನ್ನುತ್ತಿದ್ದಾಗ ಮನಸ್ಸು ಬೆಂದುಹೋಗುತ್ತಿತ್ತು. ಇವೆಲ್ಲವೂ ನಿನಗೇಕೆ ಅರ್ಥವಾಗದು? ಯಾರೋ ಅಗಸನ ಮಾತು ಕೇಳಿ ನನ್ನನ್ನು ಕಾಡಿಗಟ್ಟಿದೆಯಲ್ಲಾ, ಈ ಸೀತೆಯ ಮೇಲೆ ಅಷ್ಟೂ ನಂಬಿಕೆಯಿರಲಿಲ್ಲವೇ ನಿನಗೆ?
------------------------------------
'ನನ್ನ ರಾಮ ಬಂದು ನನ್ನನ್ನು ಸೆರೆಯಿಂದ ಬಿಡಿಸಿಕೊಂಡು ಹೋಗುವನೆಂಬ' ಆಶಯದಲ್ಲಿ ಲಂಕೆಯಲ್ಲಿ ನಾನು ಹಗಲೂ-ರಾತ್ರಿ ಉಪವಾಸವಿದ್ದು ನಿನಗಾಗಿ ಕಾಯುತ್ತಿದ್ದುದು ನಿನಗೆ ಗೊತ್ತಿತ್ತಲ್ಲವೇ? ಆದರೂ ಇದೇಕೆ ಈ ಶಿಕ್ಷೆ ನನಗೆ?
----------------------------
ಸಾಕು ರಾಮ, ಸಾಕು. ಮೊದಲು ಅಪವಾದಕ್ಕೆ ಗುರಿಯಾಗಿ ವನವಾಸ ಅನುಭವಿಸುತ್ತಿದ್ದಾಗ 'ಒಂದಲ್ಲ ಒಂದು ದಿನ ನನ್ನ ಪ್ರಭು ನನ್ನನ್ನು ಕರೆದೊಯ್ಯುತ್ತಾರೆ' ಎಂಬ ಆಶಯವಿತ್ತು. ಆದರೆ ಇಂದು ನಿನ್ನನ್ನು ಕಂಡ ಮೇಲೆ ಮತ್ತೆ ಒಂದಾಗುವ ಗಳಿಗೆ ಬಂದೀತೇನೋ ಎಂದುಕೊಂಡಿದ್ದ ನನ್ನನ್ನು ಜಾರಿಣಿ ಎಂದು ಜರೆದೆಯಲ್ಲಾ, ಆಗೆಲ್ಲಾ ನನಗೆ ನಿನ್ನ ಮೇಲಿದ್ದ ನಂಬಿಕೆ ಹೊರಟುಹೋಯಿತು. ನಿನಗೆ ನನ್ನ ಪಾತಿವ್ರತ್ಯವನ್ನು ಸಾರುವ ಅವಶ್ಯಕತೆ ನನಗೀಗ ಇಲ್ಲದಿದ್ದರೂ ಸಮಾಜಕ್ಕೆ ನಾನು ಪವಿತ್ರಳೆಂದು ಸಾರಬೇಕಿತ್ತು. ಆದ್ದರಿಂದ ನನಗಿಷ್ಟವಿಲ್ಲದಿದ್ದರೂ ನೀನು ಹೇಳಿದಂತೆ 'ಅಗ್ನಿದಿವ್ಯ'ಕ್ಕೆ ಮನಮಾಡಿದೆ. ನಾನು ಅಗ್ನಿಕುಂಡಕ್ಕೆ ಹಾರಿದ ಮೇಲೂ ಜೀವಂತವಾಗಿರುವೆನಲ್ಲಾ, ಇಷ್ಟು ಸಾಲದೆ ನಾನು ಪವಿತ್ರಳೆಂದು ಸಾರಲು??
----------------------------
ಆಯಿತು. ಇಂದಿಗೆ ನನ್ನ ತಾಳ್ಮೆಯ ಮಿತಿಮೀರಿತು. ಇನ್ನೂ ನಿನಗಾಗಿ ಕಾಯುತ್ತಾ, ನೀನು ನನಗೆ ಒಡ್ಡುವ ಪರೀಕ್ಷೆಗಳನ್ನುದುರಿಸಿ ನಿನ್ನೊಡನೆ ಬದುಕುವ ಆಸಕ್ತಿ ನನಗಿಲ್ಲ. ಈ ಪ್ರಪಂಚದ ಹಾಗೂ ನಿನ್ನ ಸಹವಾಸ ಸಾಕಾಗಿದೆ. ಭೂಮಿಜೆಯಲ್ಲವೇ ನಾನು? ನನ್ನ ಜನ್ಮಸ್ಥಾನಕ್ಕೆ ಮರಳುತ್ತೇನೆ. ಅಲ್ಲಿಗೆ ಎಲ್ಲವೂ ಮುಗಿದುಹೋಗುತ್ತದೆ-ನೀನು ನನ್ನನ್ನು ಅನುಮಾನಿಸುವುದು, ಅದನ್ನು ಬಗೆಹರಿಸಿಕೊಳ್ಳಲು ಪರೀಕ್ಷೆಗಳನ್ನೊಡ್ಡುವುದು, ನಾನು ನಿನ್ನಿದುರು ತಪ್ಪಿತಸ್ಥಳಂತೆ ನಿಲ್ಲುವುದು, ಎಲ್ಲವೂ..... ಇಂದಿಗೆ ಸೀತೆ ಅಪರಾಧಮುಕ್ತಳು. ಮುಂದೆಂದೂ ಆಕೆಯನ್ನು ಅಪವಾದಗಳು ಸುತ್ತಿಕೊಳ್ಳುವುದಿಲ್ಲ!! ನಾನು ಹೋಗುತ್ತೇನೆ ರಾಮ. ನೀನು ಎಂದಿಗೂ 'ಪರಮಪೂಜ್ಯ'ನಾಗಿ, 'ಪತಿತಪಾವನ'ನಾಗಿಯೇ ಇರು!! ನಾನು ಹೋಗುತ್ತೇನೆ.
(ಎರಡು ವರ್ಷಗಳ ಹಿಂದೆ ಬರೆದ ಕಥೆ.... ಈಗ ಓದ್ತಾ ಇರುವಾಗ ನನಗೇ 'ಪ್ರಬುದ್ಧತೆ ಕಡಿಮೆ ಇದೆಯೇನೋ ಇದರಲ್ಲಿ ಎನಿಸ್ತಿದೆ! ನಿಮ್ಮ ಅನಿಸಿಕೆಗಳಿಗೆ ಸ್ವಾಗತ. :) )